ಅಕ್ಕಮಹಾದೇವಿಯ ವಚನಗಳು
೧
ಚಿನ್ನದ ಸಂಕೋಲೆಯಾದಡೇನು, ಬಂಧನವಲ್ಲವೆ?
ಮುತ್ತಿನ ಬಲೆಯಾದಡೇನು, ತೊಡರಲ್ಲವೆ?
ನಚ್ಚುಮಚ್ಚಿನ ಭಕ್ತಿಯಲ್ಲಿ ಸಿಕ್ಕಿಕೊಂಡಿದ್ದರೆ
ಭವ ಹಿಂಗುವುದೇ ಚೆನ್ನಮಲ್ಲಿಕಾರ್ಜುನ?
೨
ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ
ತನ್ನ ನೂಲು ತನ್ನನೇ ಸುತ್ತಿ ಸುತ್ತಿ ಸಾವ ತೆರನಂತೆ
ಮನ ಬಂದುದ ಬಯಸಿ ಬಯಸಿ ಬೇವುತ್ತಿರುವೆನಯ್ಯ!
ಅಯ್ಯ, ಎನ್ನ ಮನದ ದುರಾಶೆಯ ಮಾಣಿಸಿ
ನಿಮ್ಮತ್ತ ತೋರಾ, ಚೆನ್ನಮಲ್ಲಿಕಾರ್ಜುನ
೩
ಗುರುವಿನಿಂದ ಲಿಂಗವ ಕಂಡೆ, ಜಂಗಮವ ಕಂಡೆ
ಗುರುವಿನಿಂದ ಪಾದೋದಕವ ಕಂಡೆ, ಪ್ರಸಾದವ ಕಂಡೆ
ಗುರುವಿನಿಂದ ನನ್ನ ನಾ ಕಂಡೆ, ಚೆನ್ನಮಲ್ಲಿಕಾರ್ಜುನ
೪
ಬೆಟ್ಟದ ಮೇಲೊಂದು ಮನೆಯ ಮಾಡಿ
ಮೃಗಂಗಳಿಗಂಜಿದೊಡೆಂತಯ್ಯ?
ಸಮುದ್ರದ ತಡಿಯಲೊಂದು ಮನೆಯ ಮಾಡಿ
ನೊರೆತೆರೆಗಳಿಗಂಜಿದೊಡೆಂತಯ್ಯ?
ಸಂತೆಯೊಳಗೊಂದು ಮನೆಯ ಮಾಡಿ
ಶಬ್ದಕ್ಕೆ ನಾಚಿದೊಡೆಂತಯ್ಯ?
ಚೆನ್ನಮಲ್ಲಿಕಾಜುನದೇವ ಕೇಳಯ್ಯ
ಲೋಕದೊಳಗೆ ಹುಟ್ಟಿದ ಬಳಿಕ
ಸ್ತುತಿ-ನಿಂದೆಗಳು ಬಂದರೆ
ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು
೫
ಕಾಯ ಕರ್ರನೆ ಕುಂದಿದರೇನಯ್ಯ?
ಕಾಯ ಮಿರ್ರನೆ ಮಿಂಚಿದರೇನಯ್ಯ?
ಅಂತರಂಗ ಶುದ್ಧವಾದ ಬಳಿಕ
ಚೆನ್ನಮಲ್ಲಿಕಾರ್ಜುನನನೊಲಿದ ಕಾಯ
ಎಂತಾದಡೆಮಗೇನಯ್ಯ?
೬
ನಾಳೆ ಬರುವುದು ನಮಗಿಂದೇ ಬರಲಿ
ಇಂದು ಬರುವುದು ನಮಗೀಗಲೇ ಬರಲಿ
ಆಗೀಗಲೆನ್ನದಿರೊ ಚೆನ್ನಮಲ್ಲಿಕಾರ್ಜುನ
೭
ಮರವಿದ್ದು ಫಲವೇನು? ನೆಳಲಿಲ್ಲದನ್ನಕ!
ಧನವಿದ್ದು ಫಲವೇನು ದಯವಿಲ್ಲದನ್ನಕ?
ಹಸುವಿದ್ದು ಫಲವೇನು ಹಯನಿಲ್ಲದನ್ನಕ?
ರೂಪಿದ್ದು ಫಲವೇನು ಗುಣವಿಲ್ಲದನ್ನಕ?
ಅಗಲಿದ್ದು ಫಲವೇನು ಬಾನವಿಲ್ಲದನ್ನಕ?
ನಾನಿದ್ದು ಫಲವೇನು ನಿಮ್ಮ ಜ್ಞಾನವಿಲ್ಲದನ್ನಕ?
ಚೆನ್ನಮಲ್ಲಿಕಾರ್ಜುನ
೮
ಅಂಗೈಯೊಳಗಣ ಲಿಂಗವ ಪೂಜಿಸುತ್ತ
ಮಂಗಳಾರತಿಗಳನು ತೊಳಗಿ ಬೆಳಗುತಲಿರ್ದೆ ನೋಡಯ್ಯ
ಕಂಗಳ ನೋಟ ಕರುವಿಟ್ಟ ಭಾವ,
ಹಿಂಗದ ಮೋಹ ತೆರಹಿಲ್ಲದಿರ್ದೆ ನೋಡಯ್ಯ
ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮನಲಗದ ಪೂಜೆ ಅನುವಾಯಿತ್ತೆನಗೆ
೯
ತುಂಬಿದುದು ತುಳುಕದು ನೋಡಾ
ನಂಬಿದುದು ಸಂದೇಹಿಸದು ನೋಡಾ
ಒಳಿದುದು ಓಸರಿಸದು ನೋಡಾ
ನೆರೆಯರಿದುದು ಮರೆಯದು ನೋಡಾ
ಚೆನ್ನಮಲ್ಲಿಕಾರ್ಜುನಯ್ಯ, ನೀನೊಲಿದ ಶರಣಂಗೆ
ನಿಸ್ಸೀಮ ಸುಖ ನೋಡಯ್ಯ!
೧೦
ಅರಿಯದವರೊಡನೆ ಸಂಗವ ಮಾಡಿದರೆ
ಕಲ್ಲು ಹೊಯ್ದು ಕಿಡಿಯ ತೆಗೆದುಕೊಂಬಂತೆ
ಬಲ್ಲವರೊಡನೆ ಸಂಗವ ಮಾಡಿದರೆ
ಮೊಸರ ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ
ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮ ಶರಣರ ಸಂಗ
ಕರ್ಪುರಗಿರಿಯ ಉರಿಯು ಕೊಂಡಂತೆ
೧೧
ಕಾಯದೊಳಗೆ ಅಕಾಯವಾಯಿತ್ತು
ಜೀವದೊಳಗೆ ನಿರ್ಜೀವವಾಯಿತ್ತು
ಭಾವದೊಳಗೆ ನಿರ್ಭಾವವಾಯಿತ್ತು
ಎನ್ನ ಮನದೊಳಗೆ ಘನ ನೆನಹಾಯಿತ್ತು
ಎನ್ನ ತಲೆ-ಮೊಲೆಯ ನೋಡಿ ಸಲಹಿದಿರಾಗಿ
ಚೆನ್ನಮಲ್ಲಿಕಾರ್ಜುನಯ್ಯನ ಧರ್ಮದವಳಾನು
೧೨
ಫಲ ಒಳಗೆ ಪಕ್ವವಾಗಿಯಲ್ಲದೆ
ಹೊರಗಣ ಸಿಪ್ಪೆ ಒಪ್ಪಗೆಡದು
ಕಾಮನ ಮುದ್ರೆಯ ಕಂಡು ನಿಮಗೆ ನೋವಾದೀತೆಂದು
ಆ ಭಾವದಿಂದ ಮುಚ್ಚಿದೆ
ಇದಕೆ ನೋವೇಕೆ?
ಕಾಡದಿರಣ್ಣ ಚೆನ್ನಮಲ್ಲಿಕಾರ್ಜುನದೇವನ ಒಳಗಾದವಳ
೧೩
ಎಲ್ಲ ಎಲ್ಲವನರಿದು ಫಲವೇನು
ಮತ್ತೆ ಎಲ್ಲ ಎಲ್ಲವನರಿದು ಫಲವೇನು?
ತನ್ನ ತಾನರಿಯದನ್ನಕ್ಕ?
ತನ್ನರಿವು ಕರಿಗೊಂಡ ಬಳಿಕ ಇದಿರಿಟ್ಟು ಕೇಳಲುಂಟ?
ನಿಮ್ಮರಿವು ತಲೆದೋರಿದ ಕಾರಣ
ನನ್ನ ನಾನರಿದೆ ಚೆನ್ನಮಲ್ಲಿಕಾರ್ಜುನ
ನಾಳೆ ಬರುವದು ನಮಗಿಂದೇ ಬರಲಿ
ಇಂದು ಬರುವದು ನಮಗೀಗಲೇ ಬರಲಿ !
ಆಗೀಗಲೆನ್ನದಿರೂ ಚೆನ್ನಮಲ್ಲಿಕಾರ್ಜುನ.
೧೪
ಅರಿವು ಸಾಧ್ಯವಾಯಿತ್ತೆನ್ದು ಗುರು ಲಿಂಗ ಜಂಗಮವ ಬಿಡಬಹುದೇ ?
ಸಂದುಸಂಶಯವಳಿದು ಅಖಿಂಡಜ್ಞಾನವಾಯಿತ್ತೆಂದು
ಪರಧನ ಪರಸ್ತ್ರೀಗಳುಪಬಹುದೇ ?
"ಯತ್ರ ಜೀವಸ್ತತ್ರ ಶಿವಃ" ಎಂಬ ಅಭಿನ್ನಜ್ಞಾನವಾಯಿತ್ತೆಂದು
ಶುನಕು-ಸೂಕರ-ಕುಕ್ಕುಟ-ಮಾರ್ಜಾಲಂಗಳ ಕೂಡಿ ಭುಂಜಿಸಬಹುದೇ ?
ಭಾವದಲ್ಲಿ ತನ್ನ ನಿಜದ ನೆಲೆಯನರಿವುತ್ತಿಹುದು
ಸುಜ್ಞಾನ-ಸತ್ಕ್ರಿಯಾ-ಸುನೀತಿ-ಸುಮಾರ್ಗದಲ್ಲಿ ವರ್ತಿಸುವುದು ಹೀಂಗಲ್ಲದೆ
ಜ್ಞಾನವಾಯಿತ್ತೆಂದು ತನ್ನ ಮನಕ್ಕೆ ಬಂದ ಹಾಂಗೆ ಮೀರಿ ನುಡಿದು ನಡೆದೊಡೆ
ಶ್ವಾನಗರ್ಭದಲ್ಲಿ ಹುಟ್ಟಿಸದೆ ಬಿಡುವನೇ ಚೆನ್ನಮಲ್ಲಿಕಾರ್ಜುನಯ್ಯನು ?
೧೫
ಹಸಿವಾದರೆ ಊರೊಳಗೆ ಭಿಕ್ಷಾನ್ನಂಗಳುಂಟು
ತೃಷೆಯಾದರೆ ಕೆರೆ ಬಾವಿ ಹಳ್ಳಂಗಳುಂಟು
ಶಯನಕ್ಕೆ ಹಾಳುದೇಗುಲವುಂಟು
ಚೆನ್ನಮಲ್ಲಿಕಾರ್ಜುನಯ್ಯ ಆತ್ಮಸಂಗಾತಕ್ಕೆ ನೀನೆನಗುಂಟು.
೧೬
ತನು ಕರಗದವರಲ್ಲಿ ಪುಷ್ಪವನೊಲ್ಲಯಯ್ಯಾ ನೀನು
ಮನ ಕರಗದವರಲ್ಲಿ ಗಂಧಾಕ್ಷತೆಯನೊಲ್ಲಯ್ಯ ನೀನು
ಅರಿವು ಕಣ್ತೆರೆಯದವರಲ್ಲಿ ಆರತಿಯನೊಲ್ಲಯ್ಯ ನೀನು
ಭಾವಶುದ್ದವಿಲ್ಲದವರಲ್ಲಿ ಧೂಪವನೊಲ್ಲಯ್ಯ ನೀನು
ಹರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲಯ್ಯ ನೀನು
ಹೃದಯ ಕಮಲವಿಲ್ಲದವರಲ್ಲಿ ಇರಲೊಲ್ಲಯ್ಯ ನೀನು
ಎನ್ನಲ್ಲಿ ಏನುಂಟೆಂದು ಕರಸ್ಥಲದಲ್ಲಿ ಇಂಬುಗೊಂಡೆ
ಹೇಳಾ ಚೆನ್ನಮಲ್ಲಿಕಾರ್ಜುನ
೧೭
ಎನ್ನಂತೆ ಪುಣ್ಯಂಗೆಯ್ದವರುಂಟೆ ?
ಎನ್ನಂತೆ ಭಾಗ್ಯಂಗೆಯ್ದವರುಂಟೆ ?
ಕಿನ್ನರನಂತಪ್ಪ ಸೋದರನೆನಗೆ !
ಏಳೇಳು ಜನ್ಮದಲ್ಲಿ ಶಿವಭಕ್ತರೇ ಬಂದುಗಳೆನಗೆ !
ಚೆನ್ನಮಲ್ಲಿಕಾರ್ಜುನನಂತಪ್ಪ ಗಂಡ ನೋಡಾ ಎನಗೆ !!
೧೮
ಹಿಂಡನಗಲಿ ಹಿಡಿವಡೆದ ಕುಂಜರ
ತನ್ನ ವಿಂಧ್ಯವ ನೆನೆವಂತೆ ನೆನೆವೆನೆಯ್ಯ !
ಬಂಧನಕ್ಕೆ ಬಂದ ಗಿಳಿ ತನ್ನ ಬಂಧುವ ನೆನೆವಂತೆ ನೆನೆವೆನೆಯ್ಯ !
ಕಂದ, ನೀನಿತ್ತ ಬಾ ಎಂದು
ನೀವು ನಿಮ್ಮಂದವ ತೋರಯ್ಯ ಚೆನ್ನಮಲ್ಲಿಕಾರ್ಜುನ
೧೯
ಚಿನ್ನದ ಸಂಕೋಲೆಯಾದಡೇನು, ಬಂಧನವಲ್ಲವೆ?
ಮುತ್ತಿನ ಬಲೆಯಾದಡೇನು, ತೊಡರಲ್ಲವೆ?
ನಚ್ಚುಮಚ್ಚಿನ ಭಕ್ತಿಯಲ್ಲಿ ಸಿಕ್ಕಿಕೊಂಡಿದ್ದರೆ
ಭವ ಹಿಂಗುವುದೇ ಚೆನ್ನಮಲ್ಲಿಕಾರ್ಜುನ?
೨೦
ಲಿಂಗಕ್ಕೆ ರೂಪ ಸಲಿಸುವೆ
ಜಂಗಮಕ್ಕೆ ರುಚಿಯ ಸಲಿಸುವೆ
ಕಾಯಕ್ಕೆ ಶುದ್ಧಪ್ರಸಾದವ ಕೊಂಬೆ
ಪ್ರಾಣಕ್ಕೆ ಸಿದ್ಧಪ್ರಸಾದವ ಕೊಂಬೆ
ನಿಮ್ಮ ಪ್ರಸಾದದಿಂದ ಧನ್ಯಳಾದೆನು ಚೆನ್ನಮಲ್ಲಿಕಾರ್ಜುನಯ್ಯ
೨೨
ಬೆಟ್ಟದಾ ಮೇಲೊಂದು ಮನೆಯ ಮಾಡಿ, ಮೃಗಖಗಗಳಿಗೆ ಅಂಜಿದಡೆ ಎಂತಯ್ಯಾ?
ಸಮುದ್ರದ ದಡದಲೊಂದು ಮನೆಯ ಮಾಡಿ,
ನೆರೆತೊರೆಗಳಿಗೆ ಅಂಜಿದಡೆ ಎಂತಯ್ಯಾ ?
ಸಂತೆಯೊಳಗೆ ಸಣ್ಣದೊಂದು ಮನೆಯ ಮಾಡಿ,
ಶಬ್ದಕ್ಕೆ ನಾಚಿದೊಡೆ ಎಂತಯ್ಯಾ ?
ಚನ್ನಮಲ್ಲಿಕಾರ್ಜುನಾ ಕೇಳಯ್ಯಾ
ಲೋಕದಲ್ಲಿ ಹುಟ್ಟಿದಾ ಬಳಿಕ, ಸ್ತುತಿ ನಿಂದೆಗಳು ಬಂದಡೇ , ಮನದಲ್ಲಿ ಕೋಪವ ತಾಳದೆ, ಸಮಾಧಾನಿಯಾಗಿರಬೇಕು!!
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ